ಊಳಿಗಮಾನ್ಯ ವ್ಯವಸ್ಥೆ

	ಸಾಮಾನ್ಯ ಅರ್ಥದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಅಧೀನನಾಗಿರುವಂಥ ವೈಯಕ್ತಿಕ ಸಂಬಂಧಗಳಿರುವ ಮತ್ತು ಭೂಸ್ವಾಮ್ಯ ಹಕ್ಕುಗಳನ್ನು ಅನುಕ್ರಮವಾಗಿ ಪಡೆದಿರುವ ವ್ಯವಸ್ಥೆ, ಪಾಲನೆ ಪೋಷಣೆ ಮಾಡುವ ಒಂದು ಪಕ್ಷಕ್ಕೂ ಸೇವೆ ವಿಧೇಯತೆ ತೋರುವ ಇನ್ನೊಂದು ಪಕ್ಷಕ್ಕೂ ನಡುವಣ ವೈಯಕ್ತಿಕ ಸಂಬಂಧಸೂಚಕವಾದ ಮಧ್ಯಯುಗೀಣ ನ್ಯಾಯವ್ಯವಸ್ಥೆಯೆಂಬುದು ಈ ಪದದ (ಫ್ಯೂಡಲಿಸಂ) ವಿಶಿಷ್ಟಾರ್ಥ. ಈ ಸಂಬಂಧಗಳು ಆ ಕಾಲದಲ್ಲಿದ್ದ ಸ್ವತ್ತನ್ನು ಕುರಿತಾದ ನ್ಯಾಯವನ್ನೇ ಅಲ್ಲದೆ ಮಧ್ಯಯುಗದ ದೇಶಗಳ ಇಡೀ ರಾಜ್ಯರಚನೆಯ ಮೇಲೆಯೇ ತೀವ್ರ ಪರಿಣಾಮವನ್ನುಂಟುಮಾಡಿದ್ದುವು.

	ಊಳಿಗಮಾನ್ಯ ಸಮಾಜವೆಂದಾಗ ಇಂದಿನದಕ್ಕಿಂತ ಭಿನ್ನವಾದ ಒಂದು ವಿಶಿಷ್ಟ ನಾಗರಿಕತೆಯೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಆ ಕಾಲದಲ್ಲಿದ್ದ ಪ್ರಭುಗಳ, ಜೀತಗಾರರ ಮತ್ತು ಉಂಬಳಿಗಳ ಚಿತ್ರ ಮೂಡುವುದು ಮಾತ್ರವಲ್ಲ; ಇಂಥ ಸಮಾಜ ವ್ಯವಸ್ಥೆಯಲ್ಲಿ ಅಧಿಕಾರ ನಿರತವಾದ ಆಡಳಿತಗಾರರೂ ಸೈನಿಕರೂ ರಾಷ್ಟ್ರವೆಂಬ ಅಮೂರ್ತಕಲ್ಪನೆಗೆ ಸೇವೆ ಸಲ್ಲಿಸುವವರಲ್ಲ; ಇವರಿಗೂ ಇವರ ಮೇಲ್ಪಟ್ಟ ಪ್ರಭುವಿಗೂ ಇರುವ ವೈಯಕ್ತಿಕ ಹಾಗೂ ವಿಶಿಷ್ಟ ಸಂಬಂಧಗಳಿಗಾಗಿ ಇವರು ಈ ಬಗೆಯ ಕರ್ತವ್ಯ ನಿರತರಾಗಿರುತ್ತಾರೆ. ಇವರಿಗೆ ಪ್ರತಿಫಲ ಸಲ್ಲುವುದು ವಂಶಪಾರಂಪರ್ಯವಾಗಿ ಇವರು ಅನುಭವಿಸಿಕೊಂಡು ಬರುವ ಭೂಮಾನ್ಯಗಳಿಂದ. ಇಂತಿಂಥ ಭೂಮಾನ್ಯ ಪಡೆದಿರುವವರು ಇಂತಿಂಥ ಸೇವೆ ಸಲ್ಲಿಸಬೇಕೆಂಬುದು ನಿಗದಿಯಾಗಿರುವುದರಿಂದ ಆಯಾ ಕರ್ತವ್ಯ ನಿರ್ವಹಿಸುವವರು ಆಯಾ ಸ್ಥಾನಗಳಲ್ಲಿರುವುದು ಒಂದು ದೃಷ್ಟಿಯಲ್ಲಿ ಆಕಸ್ಮಿಕ. ಸೇವೆಗೂ ವ್ಯಕ್ತಿಗೂ ಸಂಬಂಧವೆನ್ನುವುದಕ್ಕಿಂತ ಸೇವೆಗೂ ಹಿಡುವಳಿಗೂ ಸಂಬಂಧವೆನ್ನುವುದು ಹೆಚ್ಚು ಸೂಕ್ತ. ಸಾರ್ವಜನಿಕಾಧಿಕಾರವೇ ಒಡೆದು ವಿಕೇಂದ್ರೀಕೃತವಾಗಿರುವುದು ಈ ವ್ಯವಸ್ಥೆಯ ಮುಖ್ಯ ಲಕ್ಷಣ.

	ನೆಲದೊಡೆಯರು ರೈತರನ್ನು ಅಸ್ವತಂತ್ರಗೊಳಿಸಿ ಅವರ ಮೇಲೆ ರಕ್ಷಣೆ, ನ್ಯಾಯವಿತರಣೆ, ಸುಂಕ ತೆರಿಗೆ ವಸೂಲಿ ಮುಂತಾದ ನಾನಾ ಅಧಿಕಾರಗಳನ್ನು ಚಲಾಯಿಸುವ ಮೆನೋರಿಯಲ್ ಪದ್ಧತಿಗೂ ಊಳಿಗಮಾನ್ಯ ವ್ಯವಸ್ಥೆಗೂ ಐತಿಹಾಸಿಕ ಸಂಬಂಧವಿದೆ. ಈ ವ್ಯವಸ್ಥೆಯಲ್ಲಿ ದೇಶಕ್ಕೆಲ್ಲ ರಾಜನೇ ಒಡೆಯ, ಅವನ ಕೆಳಗೆ ದೊಡ್ಡ ಪಾಳೆಯಗಾರರು, ಅವರ ಅಧೀನದಲ್ಲಿ ಚಿಕ್ಕ ಪಾಳೆಯಗಾರರು, ಕೊನೆಯ ಹಂತದಲ್ಲಿ ಜೀತಗಾರರು. ಇವರಲ್ಲಿ ಪರಸ್ಪರ ಮುಖ್ಯ ಸಂಬಂಧ ಭೂಮಾನ್ಯಕ್ಕೆ ಪ್ರತಿಯಾಗಿ ಊಳಿಗವೃತ್ತಿ ಮಾಡುವುದು, ಸೈನ್ಯಸೇವೆಸಲ್ಲಿಸುವುದು, ಈ ಅನುಕ್ರಮದ ಹೊರಗಿದ್ದ ಕ್ರೈಸ್ತ ಮಠಾಧಿಕಾರಿಗಳೂ ಜೀತಗಾರರಲ್ಲದ ಸ್ವತಂತ್ರ ಜನರೂ ಈ ವ್ಯವಸ್ಥೆಯ ಪ್ರಭಾವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಒಳಗಾದರು. ಇದರ ವ್ಯಾಪ್ತಿ ಸರ್ವತೋಮುಖವಾಗಿ, ಸಾಮಾಜಿಕ, ನೈತಿಕ, ಧಾರ್ಮಿಕ ಭಾವನೆಗಳನ್ನೂ ಒಳಗೊಂಡ ಹೊಸದೊಂದು ಸಂಸ್ಕøತಿಯೇ ಉದ್ಭವಿಸಿರುವುದನ್ನು ಕಾಣಬಹುದು. ಸ್ಥೂಲವಾಗಿ 9ನೆಯ ಶತಮಾನದಿಂದ 13ನೆಯ ಶತಮಾನದ ವರೆಗಿನ ಕಾಲ ಊಳಿಗಮಾನ್ಯದ್ದೆನ್ನಬಹುದು.

	ಮೇನರ್ ಅಥವಾ ಜಹಗೀರು ವ್ಯವಸ್ಥೆಯ ಕೇಂದ್ರವಾಗಿ ಮೇನರಿನ ಒಡೆಯನ-ಪ್ರಭುವಿನ-ಭವನ, ಅದರ ಸುತ್ತ ಅವನಿಗೆ ಸೇರಿದ ಗ್ರಾಮಸಮೂಹ. ಕೆಲವು ಜಮೀನುಗಳು ಮಾತ್ರ ಅವನಿಗೆ ಸ್ವಂತ, ಉಳಿದವು ಜೀತದಾರರಿಗೆ ಊಳಿಗಮಾನ್ಯವಾಗಿ ಸೇರಿದ್ದು. ಭೂಮಿ ಇವರಿಗೆ ಅನುಭವ ಬಾಧ್ಯಸ್ಥವೇ ಹೊರತು ಸ್ವಂತವಲ್ಲ. ಇವರ ಕಾಲಾನಂತರ ಚಾಲ್ತಿಯಲ್ಲಿ ಇದು ಇವರ ವಾರಸುದಾರರಿಗೆ ಸೇರುತ್ತಿತ್ತು. ಜೀತಗಾರರು ಗುಲಾಮರಲ್ಲದಿದ್ದರೆ ಅವರಿಗೆ ಭೂಮಿಯನ್ನು ಬಿಟ್ಟು ಹೋಗುವ ಹಕ್ಕಿರಲಿಲ್ಲ. ಜಮೀನನ್ನು ಸಾಗುವಳಿಗೆ ಪಡೆದದ್ದಕ್ಕೆ ಮಾಡಬೇಕಾದ ಪ್ರತಿಸೇವೆಯೆಂದರೆ ಬೆಳೆ ಪಶುಧನಗಳ ಒಂದಂಶ ಸಲ್ಲಿಕೆ, ನಿರ್ದಿಷ್ಟ ಕಾಲಗಳಲ್ಲಿ ಪ್ರಭುವಿನ ಸ್ವಂತ ಜಮೀನಿನ ವ್ಯವಸಾಯಕ್ಕೆ ಉಚಿತಸೇವೆ, ಸೈನ್ಯ ಸೇವೆ ಮೊದಲಾದವು. ಪ್ರಭುಗಳ ಕರ್ತವ್ಯಗಳೆಂದರೆ ಜಹಗೀರನ ರಕ್ಷಣೆ, ವ್ಯಾಜ್ಯಗಳ ತೀರ್ಪು, ಜನರ ಸೌಖ್ಯಕ್ಕೆ ಅಗತ್ಯವಾದ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ನಿರ್ವಹಣೆ, ಸಮಾಜ ಸಂಪ್ರದಾಯಬದ್ಧವಾದ್ದರಿಂದ ಪ್ರಭುಗಳು ಸ್ವಚ್ಫಂದವರ್ತಿಗಳಾಗಲೂ ಜೀತಗಾರರು ತೀವ್ರಗಾಮಿಗಳಾಗಲೂ ಅವಕಾಶ ಕಡಿಮೆಯಿತ್ತು.

	ತಾತ್ತ್ವಿಕವಾಗಿ ರಾಜನೇ ದೇಶಕ್ಕೆಲ್ಲಾ ಒಡೆಯನಾಗಿದ್ದು ಜನರೆಲ್ಲ ಅವನ ಅಧೀನರಾದರೂ ವಾಸ್ತವವಾಗಿ ಪ್ರಭುಗಳ ಸಮೂಹದಲ್ಲಿ ಈತ ಅಗ್ರ. ಸ್ವಂತಕ್ಕೆ ಸೇರಿದ ಮೇನರುಗಳಿಂದ ಈತ ವರಮಾನ ಪಡೆಯುತ್ತಿದ್ದ. ಊಳಿಗಮಾನ್ಯ ಕರಾರಿನ ಪ್ರಕಾರ ಪ್ರಭುಗಳು ಸುಸಜ್ಜಿತ ಯೋಧರೊಡನೆ ರಾಜನಿಗೆ ಸೈನ್ಯಸೇವೆ ಸಲ್ಲಿಸಬೇಕಿತ್ತು. ನಿರ್ದಿಷ್ಟ ವೇಳೆಗಳಲ್ಲಿ ಹಣಕಾಸು ಕೊಡಬೇಕಿತ್ತು. ಆದರೆ ಇವುಗಳ ಸಂಗ್ರಹಣ ರಾಜನ ಪ್ರಭಾವಕ್ಕೆ ತಕ್ಕಂತಿತ್ತು. ಹಲವು ವೇಳೆ ರಾಜನಿಗಿಂತ ಅವನ ಅಧೀನದಲ್ಲಿದ್ದ ಪ್ರಭುಗಳೇ ಹೆಚ್ಚು ಶ್ರೀಮಂತರಾಗಿಯೂ ಪ್ರಭಾವಶಾಲಿಯಾಗಿಯೂ ಇರುತ್ತಿದ್ದರು. ಆ ಕಾಲದಲ್ಲಿ ರಾಜನಿಷ್ಠೆಗೆ ಪ್ರಧಾನ ಸ್ಥಾನವಿರಲಿಲ್ಲ. ಪ್ರತಿಯೊಬ್ಬರೂ ಯಾರಿಗೆ "ನಿನ್ನವನು" ಎಂದು ಮಾತಿತ್ತರೊ ಅವರಿಗೆ ಅನುಕೂಲವಾಗಿ ನಡೆಯುವುದೇ ಆಗಿನ ನೀತಿಸೂತ್ರವಾಗಿತ್ತು. 				 									 (ಎಸ್.ವಿ.ಡಿ.)

	ಪ್ರಭುಗಳ ವರ್ಗದ ಅನಂತರದ ವರ್ಗವೇ ಆಶ್ರಿತ ವರ್ಗ. ಇವರು ನೇರವಾಗಿ ಪ್ರಭುಗಳ ಅಧೀನಕ್ಕೆ ಒಳಪಟ್ಟಿದ್ದರು; ಅವರಿಂದ ದೊರೆತ ಭೂಮಿಯ ಮೇಲ್ವಿಚಾರಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಭೂಮಿಯಿಂದ ಬರುತ್ತಿದ್ದ ಗೇಣಿಯೇ ಈ ವರ್ಗದ ಮುಖ್ಯ ಆದಾಯ. ಪ್ರಭುಗಳಿಂದ ದೊರಕಿದ ಭೂಮಿಗೆ ಪ್ರತಿಯಾಗಿ ಆಶ್ರಿತರು ಅವರಿಗೆ ಅನೇಕ ಬಗೆಯ ಕೈಂಕರ್ಯ ಸಲ್ಲಿಸುತ್ತಿದ್ದರು. ಸೈನಿಕ ಸೇವೆಗೆ ಇವರು ಸದಾ ಸಿದ್ಧರಾಗಿರಬೇಕಾದ್ದದ್ದು ಅವಶ್ಯ. ಇಂಥ ಸೈನಿಕ ಸೇವೆ ಸಾಮಾನ್ಯವಾಗಿ ನಲವತ್ತು ದಿನಗಳ ಮಿತಿಗೆ ಒಳಗಾಗಿತ್ತು. ಪ್ರವಾಸಕ್ಕಾಗಲಿ ಅಥವಾ ಬೇಟೆಗಾಗಲಿ ಪ್ರಭು ಹೊರಟಾಗ ಅವನಿಗೆ ಸಹಾಯ ಮತ್ತು ಸತ್ಕಾರ ನೀಡುವುದೂ ಅವರು ಯುದ್ಧದಲ್ಲಿ ಕೈಸೆರೆಯಾದಲ್ಲಿ ಅವರ ಬಿಡುಗಡೆಗೆ ಹಣ ತೆರುವುದೂ ಪ್ರಭುವಿನ ಮಗಳ ಮದುವೆಯಾದಾಗ, ಅವನ ಮಗ ಸೈನಿಕ ಶಿಕ್ಷಣ ಮುಗಿಸಿ ಯೋಧ ಪದವಿಗಳಿಸಿದಾಗ, ಆಶ್ರಿತ ಅವನಿಗೆ ಅಪಾರ ಕಾಣಿಕೆ ಸಲ್ಲಿಸಬೇಕಾಗಿತ್ತು. ತನ್ನ ಧನಿಗೆ ಸಹಾಯ ನೀಡುವುದಷ್ಟೇ ಆಶ್ರಿತನ ಕರ್ತವ್ಯವಲ್ಲ; ಯಥೋಚಿತ ಸಲಹೆ ನೀಡುವುದೂ ಅವನ ಒಂದು ಕರ್ತವ್ಯ.

	ಊಳಿಗಮಾನ್ಯ ಪದ್ಧತಿಯಲ್ಲಿ ಕಟ್ಟಕಡೆಯ ವರ್ಗವೇ ಗೇಣಿದಾರರ, ಜೀತಗಾರರ ಮತ್ತು ಕೃಷಿ ಕಾರ್ಮಿಕರ ವರ್ಗ. ಈ ವರ್ಗದವರು ಅಸಂಖ್ಯಾತರು, ನೇರವಾಗಿ ಕೃಷಿ ಕೆಲಸದಲ್ಲಿ ನಿರತರಾಗಿದ್ದವರು, ಗೇಣಿದಾರರ ಮತ್ತು ಜೀತಗಾರರ ಸ್ಥಿತಿಗತಿಗಳನ್ನು ನಿರ್ದಿಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸ್ಥಿತಿಗತಿಗಳಲ್ಲಿ ಕಾಲಕಾಲಕ್ಕೂ ವ್ಯತ್ಯಾಸಗಳಿದ್ದುವು. ಒಂದು ದೃಷ್ಟಿಯಲ್ಲಿ ಗೇಣಿದಾರರ ಜೀವನ ಆಧುನಿಕ ಕೂಲಿಗಾರರ ಜೀವನಕ್ಕಿಂತ ಉತ್ತಮವಾಗಿತ್ತೆಂದು ಹೇಳಬಹುದು. ಆತನಿಗೆ ತನ್ನ ಗೇಣಿಯ ಪೂರ್ಣ ರಕ್ಷಣೆಯಿತ್ತು. ಪ್ರಭು ಆತನಿಂದ ಭೂಮಿಯನ್ನು ಸ್ವೇಚ್ಫೆಯಾಗಿ, ಸಂಪ್ರದಾಯಕ್ಕೆ ವಿರುದ್ಧವಾಗಿ ಕಿತ್ತುಕೊಳ್ಳುವ ಹಾಗಿರಲಿಲ್ಲ. ಆಸ್ತಿಯ ಉತ್ತರಾಧಿಕಾರದ ಹಕ್ಕೂ ತಂದೆಯಿಂದ ಮಗನಿಗೆ ವಂಶಪಾರಂಪರ್ಯವಾಗಿ ಸಾಮಾನ್ಯವಾಗಿ ಯಾವ ಅಡಚಣೆಯೂ ಇಲ್ಲದೆ ನಡೆದುಬರುತ್ತಿತ್ತು. ಗೇಣಿದಾರ ಬಹುಮಟ್ಟಿಗೆ ರಕ್ಷಣೆಯನ್ನೂ ಸ್ವಲ್ಪಮಟ್ಟಿನ ಜೀವನಾನುಕೂಲಗಳನ್ನೂ ಹೊಂದಿದ್ದ, ಆದರೆ ತನ್ನ ಧನಿಯನ್ನು ಸದಾ ಅವಲಂಬಿಸಿರಬೇಕಾಗಿತ್ತು. ಪ್ರತಿ ಗಳಿಗೆಯೂ ತನ್ನ ಧನಿಯ ಸುಖ ಸಂತೋಷಗಳಿಗಾಗಿ ಶ್ರಮಿಸುವುದು ಅವನ ಕರ್ತವ್ಯ. ಧನಿ ಅವನ ಮೇಲೆ ಹಾಕುವ ಕರಕ್ಕೆ ಯಾವ ಮಿತಿಯೂ ಇರಲಿಲ್ಲ. ಬಲವಂತ ಬಿಟ್ಟಿ ಸೇವೆಗೂ ಮಿತಿಯಿರಲಿಲ್ಲ. ಇದರಿಂದ ಅವನ ಆರ್ಥಿಕ ಪರಿಸ್ಥಿತಿಗಳಿಗೆ ಪ್ರತಿಕೂಲವೊದಗುತ್ತಿದ್ದದ್ದಲ್ಲದೆ ಅನೇಕ ವೇಳೆ ಸ್ವಕಾರ್ಯಗಳಿಗೆ ಸಮಯವೇ ಉಳಿಯುತ್ತಿರಲಿಲ್ಲ. ಜಗಳ ಸಂಭವಿಸಿದಾಗ ಪ್ರಭುವಿನ ನ್ಯಾಯಸ್ಥಾನದಲ್ಲಿ ವಿಚಾರಣೆಗೆ ಗುರಿಯಾಗಿ, ಆತ ಹಾಕಿದ ದಂಡ ತೆರಬೇಕಾಗಿತ್ತು. ಹೀಗೆ ಗೇಣಿದಾರ ವರ್ಗದ್ದು ಪಾರತಂತ್ರ್ಯದ ಜೀವನ. ಅನೇಕ ವೇಳೆ ಅಸಹನೀಯ ಕಷ್ಟ ಅನುಭವಿಸಬೇಕಾಗಿದ್ದ ಈ ಜನ ಸಂಪ್ರದಾಯ ಬಲದಿಂದ ಅದಕ್ಕೆ ಬಂಧಿತರಾಗಿದ್ದರು.						 (ಎಚ್.ಆರ್.) 

	ಸಾಮಾಜಿಕ ದೃಷ್ಟಿಯಿಂದ ಇದು ಆದರ್ಶವೀರರ ಯುಗ. ತಾವು ಆಶ್ರಯಿಸಿದ್ದ ನಾಯಕರಲ್ಲಿ ಭಕ್ತಿಯಿಂದಲೂ ನಿಷ್ಠೆಯಿಂದಲೂ ನಡೆದುಕೊಳ್ಳುವುದೂ ಮಹಿಳೆಯರ ಗೌರವವನ್ನು ಕಾಪಾಡುವುದೂ ದೀನ ದುರ್ಬಲರ ರಕ್ಷಣೆಯಲ್ಲಿ ಮುಂದಾಗಿರುವುದೂ ತಮ್ಮ ಆದರ್ಶ ಮಹಿಳೆಯರಲ್ಲಿ ಅನುಕೂಲವಾಗಿ ವರ್ತಿಸುವುದೂ ವೀರೋಚಿತ ವರ್ತನೆಗಳಾಗಿದ್ದುವು. ಶಸ್ತ್ರಾಭ್ಯಾಸ, ಯುದ್ಧ ತರಬೇತು, ನಾಯಕರ ಆಸ್ಥಾನಗಳ ನಡೆವಳಿ, ಮಲ್ಲಯುದ್ಧ ಕ್ರೀಡಾಯುದ್ಧಗಳ ನಿಯಮಗಳು- ಇವೇ ಇವರ ವಿದ್ಯಾಕ್ರಮದಲ್ಲಿ ಮುಖ್ಯವಾಗಿದ್ದುವು. ಶಾಸ್ತ್ರe್ಞÁನ ಗೌಣವೆನಿಸಿತ್ತು, ಹಲವಾರು ಶ್ರೀಮಂತ ವೀರರು ನಿರಕ್ಷರರಾಗಿಯೇ ಇದ್ದರು.

	ಈ ಅಸಂಯುಕ್ತ ಸಮಾಜ ವ್ಯವಸ್ಥೆ ಆ ಕಾಲಕ್ಕೆ ಉಚಿತವಾಗಿದ್ದರೂ ಇದರಲ್ಲಿ ಅನೇಕ ಲೋಪದೋಷಗಳಿದ್ದುವು. ಅನಾಗರಿಕ ದಾಳಿಕಾರರ ಹಾವಳಿ ಅಡಗಿದರೂ ಪದೇ ಪದೇ ಪ್ರಭುಗಳ ನಡುವೆ ನಡೆಯುತ್ತಿದ್ದ ಹೋರಾಟಗಳಿಂದ ದೇಶದಲ್ಲಿ ಪೂರ್ಣ ಶಾಂತಿ ಏರ್ಪಡಲಿಲ್ಲ. ವ್ಯಾಪಾರ ವಾಣಿಜ್ಯಕ್ಕೆ ಅನುಕೂಲ ಕಡಿಮೆ. ಜನರ ದೃಷ್ಟಿ ಸ್ಥಳೀಯ, ಸಂಕುಚಿತ. ಈ ವಾತಾವರಣದಲ್ಲಿ ಸಂಸ್ಕøತಿಯ ಬೆಳೆವಣಿಗೆ ಮಂದವಾಗಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೂ ಇದನ್ನು ಕತ್ತಲೆಯ ಕಾಲವೆಂದು ಭಾವಿಸುವುದು ಸೂಕ್ತವಲ್ಲ. ದಾಳಿ ಮಾಡಲು ಬಂದ ಅನಾಗರಿಕನನ್ನು ಈ ಕಾಲದ ಜನ ತಡೆಗಟ್ಟಿ ಸುಸಂಸ್ಕøತರನ್ನಾಗಿ ಪರಿವರ್ತಿಸಿ ಪುನರುಜ್ಜೀವನಕ್ಕೆ ತಳಹದಿ ಹಾಕಿದ್ದಲ್ಲದೆ ವಿಶ್ವ ಸಂಸ್ಕøತಿಗೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಫ್ರಾನ್ಸಿನ ಕೆಥೆಡ್ರಲ್‍ಗಳೂ ಡಾಂಟೆಯ ದಿ ಡಿವೈನ್ ಕಾಮೆಡಿಯಂಥ ಉದಾತ್ತ ಕಾವ್ಯಗಳೂ ಈ ವ್ಯವಸ್ಥೆ ನೀಡಿರುವ ಉತ್ಕøಷ್ಟ ಕಾಣಿಕೆಗಳು.

	ವಿಶ್ವದ ಪ್ರತಿಯೊಂದು ಮಹಾ ನಾಗರಿಕತೆಯ ಇತಿಹಾಸದಲ್ಲೂ ಒಂದಲ್ಲೊಂದು ಘಟ್ಟದಲ್ಲಿ ಊಳಿಗಮಾನ್ಯ ಅವಸ್ಥೆಯನ್ನು ಕಾಣಬಹುದೆಂಬುದು ತೌಲನಿಕ ಇತಿಹಾಸದಿಂದ ವೇದ್ಯವಾಗಿರುವ ಸಂಗತಿ. ಊಳಿಗಮಾನ್ಯ ವ್ಯವಸ್ಥೆಯೂ ಬಂಡವಾಳ ವ್ಯವಸ್ಥೆಯೂ ಸಮಾಜವಾದಿ ವ್ಯವಸ್ಥೆಯೂ ಪ್ರತಿಯೊಂದು ಜನಾಂಗದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಲ್ಲಿ ಅನುಕ್ರಮವಾಗಿ ಬರುವ ಮೂರು ಘಟ್ಟಗಳೆಂಬುದು ಮಾಕ್ರ್ಸ್‍ವಾದದ ಸಿದ್ದಾಂತ. ಕೆಲವು ರಾಜಕೀಯ ಹಾಗೂ ಮಾನಸಿಕ ಪರಿಸ್ಥಿತಿಗಳಿಂದಾಗಿ ಊಳಿಗಮಾನ್ಯ ವ್ಯವಸ್ಥೆ ಉದ್ಭವಿಸುವುದೆಂಬುದು ಈ ತೌಲನಿಕ ವಿವೇಚನೆಯಿಂದ ಮೂಡಿಬರುವ ವಿಚಾರ. ವಿಶಾಲ ಪ್ರದೇಶದ ಆಡಳಿತ ನಡೆಸಲು ಅಗತ್ಯವಾದ ಭೌತಿಕ ಮಾನಸಿಕ ಪರಿಸರವಾಗಲಿ ಸೌಲಭ್ಯವಾಗಲಿ ಇಲ್ಲದಂಥ ಪರಿಸ್ಥಿತಿಯಲ್ಲಿ ಒಂದು ದೊಡ್ಡ ಸಾಮ್ರಾಜ್ಯದ ನಿರ್ಮಾಣವಾದಾಗ ಅದರ ಫಲವಾಗಿ ಊಳಿಗಮಾನ್ಯ ವ್ಯವಸ್ಥೆ ಉದ್ಭವಿಸಬಹುದು. ರಾಷ್ಟ್ರದ ಕಲ್ಪನೆಯಾಗಲಿ, ಒಗ್ಗಟ್ಟನ್ನು ಸಾಧಿಸುವ ಬಿಗಿಯಾಗಲಿ ಸಾರಿಗೆ ಸಂಪರ್ಕವಾಗಲಿ ಇಲ್ಲದಾಗ ಈ ಬಗೆಯ ವ್ಯವಸ್ಥೆ ಬರುವ ಸಂಭವವುಂಟು. ಭಾರತದಲ್ಲಿ ಔರಂಗeóÉೀಬನ ಅನಂತರ ಇಂಥ ಪರಿಸ್ಥಿತಿ ಏರ್ಪಟ್ಟಿತ್ತೆನ್ನಬಹುದು. ಅನಾಗರಿಕ ಸ್ಥಿತಿಯಿಂದ ಆಧುನಿಕ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವಾಗ ಪ್ರತಿಯೊಂದು ಜನಾಂಗದಲ್ಲೂ ಊಳಿಗಮಾನ್ಯ ವ್ಯವಸ್ಥೆ ತಲೆಯೆತ್ತುವ ಅಪಾಯವಿದೆ. ಆದರೆ ಆರ್ಥಿಕ ಸಾಮಾಜಿಕ ಬೆಳೆವಣಿಗೆಯ ಹಾದಿಯಲ್ಲಿ ಊಳಿಗಮಾನ್ಯ ಪದ್ಧತಿ ಸಂಭಾವ್ಯವೇ ಹೊರತು ಅನಿವಾರ್ಯವೇನೂ ಅಲ್ಲ. ಅದನ್ನು ಹಾರಿಸಿ ಮುಂದಿನ ಘಟ್ಟ ಅಡಗಿರುವುದು ಸಾಧ್ಯ. ಹೊರ ಸಂಪರ್ಕವಿಲ್ಲದೆ ಸ್ಥಗಿತವಾದ ಕೃಷಿಕ ಅರ್ಥವ್ಯವಸ್ಥೆಗಳಲ್ಲಿ ಊಳಿಗಮಾನ್ಯ ಲಕ್ಷಣಗಳಿರುವ ಸೈನಿಕ ಶ್ರೀಮಂತ ನಿರಂಕುಶ ಪ್ರಭುತ್ವಗಳನ್ನು ಇಂದಿಗೂ ಕಾಣಬಹುದು. 					  (ಎಸ್.ವಿ.ಡಿ.)

ಊಳಿಗಮಾನ್ಯ ವ್ಯವಸ್ಥೆಯ ಇತಿಹಾಸ : ಯೂರೋಪಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ಎಂಟನೆಯ ಶತಮಾನದಲ್ಲಿ ನಿರ್ದಿಷ್ಟ ರೂಪ ತಳೆದು ಹದಿನೆಂಟನೆಯ ಶತಮಾನದ ಅಂತ್ಯದವರೆಗೂ ತನ್ನ ಪ್ರಭಾವವನ್ನು ಅಬಾಧಿತವಾಗಿ ಹಬ್ಬಿಸಿತ್ತು. ಎಂಟನೆಯ ಶತಮಾನಕ್ಕೂ ಬಲು ಹಿಂದೆ, ರೋಮನ್ ಚಕ್ರಾಧಿಪತ್ಯದ ಕಾಲದಲ್ಲೇ, ಈ ವ್ಯವಸ್ಥೆಯ ಮೂಲಗಳನ್ನು ಕಾಣಬಹುದು. ರೋಮನ್ ಸಾಮ್ರಾಜ್ಯದ ಅವನತಿ ಮತ್ತು ಪತನ ಕಾಲದಲ್ಲಿ ಏರ್ಪಟ್ಟ ಅಶಾಂತಿ ಮತ್ತು ಅರಾಜಕತೆ ಇದರ ಉಗಮಕ್ಕೆ ನಾಂದಿಯಾಯಿತೆಂದು ಹೇಳಬಹುದು. ಕೇಂದ್ರಾಡಳಿತ ಕ್ಷೀಣಿಸಿ ಸಣ್ಣಪುಟ್ಟ ರಾಜ್ಯಗಳ ಮತ್ತು ಪಾಳೆಯಪಟ್ಟುಗಳ ಏಳಿಗೆಗೆ ತೆರವು ಮಾಡಿಕೊಟ್ಟಿತು. ನಿರಂತರ ಅಂತರ್ಯುದ್ಧಗಳಲ್ಲಿ ತೊಡಗಿ, ರಾಜಕೀಯ ಆರ್ಥಿಕ ದುರ್ಬಲತೆಗೆ ಕಾರಣವಾಗಿ ಬಲಹೀನವಾಗಿದ್ದ ರಾಜ್ಯಗಳು ತಮ್ಮ ಪ್ರಜೆಗಳಿಗೆ ಪರಕೀಯರ ಮತ್ತು ಅನಾಗರಿಕರ ದಾಳಿಯ ವಿರುದ್ಧ ರಕ್ಷಣೆ ಒದಗಿಸಲು ಅಸಮರ್ಥವಾಗಿದ್ದವು. ಸದಾ ಯುದ್ಧಭೀತಿಗೊಳಗಾಗಿದ್ದ ಆಗಿನ ಜನ ತಮ್ಮ ಜೀವದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ಮಧ್ಯಯುಗದಲ್ಲಿ ಜನರಿಗಿದ್ದ ಏಕಮೇವ ಆಸ್ತಿಯೆಂದರೆ ಭೂಮಿ. ಅಂಥ ಭೂಮಿಯನ್ನು ತಮ್ಮ ಜೀವಕ್ಕೆ ರಕ್ಷಣೆಯನ್ನೊದಗಿಸುವ ಸಮರ್ಥ ವ್ಯಕ್ತಿಗೆ ಒಪ್ಪಿಸಿ ರಕ್ಷಣೆ ಪಡೆದರು. ಇದರಿಂದ ಊಳಿಗಮಾನ್ಯ ಪದ್ಧತಿಗೆ ಭೂಮಿಯೇ ಅಸ್ತಿಭಾರವಾಯಿತು.

	ರೋಮನ್ ಸಾಮ್ರಾಜ್ಯ ಕಾಲದಲ್ಲಿ ಶಕ್ತರಾಗಿದ್ದ ಕೆಲವರು ಯುದ್ಧವೀರರಾಗಿದ್ದರು. ಕೆಲವು ಖಾಸಗಿ ಭೂಮಿಗಳು ಇವರ ಒಡೆತನದಲ್ಲಿದ್ದವು. ಇವುಗಳ ಮೇಲೆ ಸರ್ಕಾರದ ಅಧಿಕಾರವಿಲ್ಲದ್ದರಿಂದ ಇವರು ಈ ನೆಲವನ್ನು ಯಾರಿಗೆ ಬೇಕಾದರೂ ಕೊಡಬಹುದಾಗಿತ್ತು. ಈ ಕಾರಣದಿಂದ ಇವರು ತಮ್ಮ ಸುತ್ತಲೂ ನಿಷ್ಠಾವಂತ ಯೋಧರ ಗುಂಪುಗಳನ್ನು ಕಟ್ಟಿಕೊಂಡಿದ್ದರು. ಮುಂದೆ ಎರಡನೆಯ ಶತಮಾನದ ವೇಳೆಗೆ ಇದು ಸಾಮಾನ್ಯ ಪದ್ಧತಿಯಾಯಿತು. ದೈಹಿಕ ಶಕ್ತಿಯುಳ್ಳ ಕಡಿಮೆ ದರ್ಜೆಯ ಜನರನೇಕರು ತಮ್ಮ ಸೇವೆಯನ್ನು ಬಲಿಷ್ಠ ಪ್ರಭುಗಳಿಗೆ ಮುಡಿಪಾಗಿಡುವ ಪದ್ಧತಿ ರೂಪುಗೊಂಡಿತು. ಇವರ ನಿಷ್ಠೆಗೆ ಪ್ರತಿಯಾಗಿ ಇವರನ್ನು ಪಾಲಿಸಿ ಪೋಷಿಸುವ ಹೊಣೆ ಪ್ರಭುವಿನದಾಗಿತ್ತು. ಮೊದಮೊದಲು ಆತ ಇವರಿಗೆ ನೆಲವನ್ನು ದಾನವಾಗಿ ಕೊಡುತ್ತಿದ್ದ. ಮುಂದೆ ಅದನ್ನು ಅನುಭವಿಸುವ ಹಕ್ಕನ್ನು ಮಾತ್ರ ಕೊಡುವ ಪದ್ಧತಿ ಬೆಳೆಯಿತು. ಒಡೆತನ ಪ್ರಭುವಿನಲ್ಲೇ ಉಳಿದಿತ್ತು. ಫ್ರಾಂಕಿಷ್ ದೊರೆಗಳಲ್ಲೊಬ್ಬರಾದ ಚಾರಲ್ಸ್ ಮಾರ್ಟೆಲ್ಲನ ಕಾಲದಲ್ಲೇ ಈ ಹೊಸ ಪದ್ಧತಿ ಜಾರಿಗೆ ಬಂದದ್ದು. ಜರೂರು ಪರಿಸ್ಥಿತಿ ಒದಗಿದ್ದಾಗ ಈ ದೊರೆ ಚರ್ಚಿನ ಭೂಮಿ ವಶಪಡಿಸಿಕೊಂಡು ಅವನ್ನು ಜೀತಗಾರರಿಗೆ ಕೊಟ್ಟಿದ್ದಲ್ಲದೆ ಸ್ವಂತ ನೆಲವನ್ನೂ ಇದೇ ರೀತಿ ಹಂಚಿದ. ದೊರೆಯ ಉದಾಹರಣೆಯನ್ನೇ ಇತರ ಪ್ರಭುಗಳೂ ಅನುಸರಿಸಿದರು.

	ಫ್ರಾಂಕಿಷ್ ದೊರೆಗಳು ಯೂರೋಪಿನಲ್ಲಿ ತಮ್ಮ ರಾಜ್ಯ ವಿಸ್ತರಿಸಿದಂತೆ ಈ ವ್ಯವಸ್ಥೆ ಇತರ ಕಡೆಗಳಿಗೂ ಹಬ್ಬಿತು. ಹನ್ನೊಂದನೆಯ ಶತಮಾನದ ವೇಳೆಗೆ ಇಂಗ್ಲೆಂಡ್ ಸ್ಕಾಟ್ಲೆಂಡ್ ಐರ್ಲೆಂಡ್‍ಗಳಲ್ಲೂ ಇದು ಸಾಮಾನ್ಯವಾಯಿತು. ಧರ್ಮಯುದ್ಧಗಳಲ್ಲಿ ಐರೋಪ್ಯ ಕ್ರೈಸ್ತರು ಜಯಿಸಿದ ಪೂರ್ವದ ಕಡೆಯ ನಾಡುಗಳಲ್ಲೂ ಊಳಿಗಮಾನ್ಯ ವ್ಯವಸ್ಥೆ ಬೇರೂರಿತೆನ್ನಬಹುದು. ಆದರೆ ಯೂರೋಪಿನ ಕೆಲವು ಭಾಗಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಬರಲೇ ಇಲ್ಲ. ಅವು ಸಾಮೂಹಿಕ ಪದ್ಧತಿಯಿಂದ ನೇರವಾಗಿ ಆಧುನಿಕ ವ್ಯವಸ್ಥೆಗೆ ಜಾರಿಕೊಂಡವು.

	ಊಳಿಗಮಾನ್ಯ ವ್ಯವಸ್ಥೆಯ ಆಂತರಿಕ ಬೆಳೆವಣಿಗೆಯಾದದ್ದು ಒಂಬತ್ತನೆಯ ಶತಮಾನದಲ್ಲಿ. ಭೂಮಾನ್ಯ ವಂಶಪಾರಂಪರ್ಯವಾದದ್ದು ಆಗಲೇ. ಮುಂದೆ ಕ್ರಮೇಣ ಊಳಿಗಮಾನ್ಯ ವ್ಯವಸ್ಥೆಯನ್ನು ಸೆಳೆದಿಟ್ಟಿದ್ದ ಕೇಂದ್ರ ಶಕ್ತಿ ಕ್ಷೀಣಿಸಿತು. ದೊರೆ ದುರ್ಬಲನಾದ. ಸ್ಥಳೀಯ ಪ್ರಭುಗಳು ಸ್ವತಂತ್ರವಾಗಿ ಬಲಿಷ್ಠರಾಗಿ ತಂತಮ್ಮ ಪ್ರಾದೇಶಿಕ ರಾಜ್ಯಗಳನ್ನು ಕಟ್ಟಿಕೊಂಡರು. 12ನೆಯ ಶತಮಾನದ ವೇಳೆಗೆ ಈ ವ್ಯವಸ್ಥೆಯ ಸಾಮಾಜಿಕ ಪ್ರಾಬಲ್ಯವೂ ಕುಂದಲಾರಂಭಿಸಿತೆನ್ನಬಹುದು. ನಾನಾ ಬಗೆಯ ವಿರುದ್ಧ ಶಕ್ತಿಗಳ ಆಘಾತ ಒದಗಲಾರಂಭಿಸಿತು. ಕೇಂದ್ರ ಪ್ರಾಬಲ್ಯವುಳ್ಳ ರಾಷ್ಟ್ರಗಳ ಉದಯವೂ ರೋಮನ್ ಮಾದರಿಯಲ್ಲಿ ಸಂಬಳ ಪಡೆಯುವ ಅಧಿಕಾರಿಗಳ ಹಾಗೂ ಸೈನ್ಯದ ಸೃಷ್ಟಿಯೂ ಪ್ರಭು-ಜೀತಗಾರ ಸಂಬಂಧದ ಬದಲು ದೊರೆ-ಪ್ರಜೆ ಸಂಬಂಧದ ಬೆಳೆವಣಿಗೆಯೂ ಆರ್ಥಿಕ ಶಕ್ತಿಯುಳ್ಳ ನಗರಗಳ ಉದಯವೂ ಇದರ ಕ್ಷೀಣಗತಿಗೆ ಕೆಲವು ಕಾರಣಗಳು. ಮೇನರಿನ ಪದ್ಧತಿ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಕೊಂಡಿದ್ದರಿಂದ ಹಳೆಯ ಶ್ರೀಮಂತರ ಪ್ರಭಾವ ಕುಗ್ಗಿತು. ವಾಣಿಜ್ಯ ವಹಿವಾಟುಗಳಿಂದ ಹಣವಂತರಾದವರನೇಕರು ನೆಲವನ್ನೂ ಇತರ ಸ್ವತ್ತುಗಳಂತೆ ಕೊಳ್ಳಲಾರಂಭಿಸಿದಾಗ ಈ ವ್ಯವಸ್ಥೆಯ ಕಟ್ಟು ಸಡಿಲವಾಯಿತು. ಆದರೂ ಊಳಿಗಮಾನ್ಯ ವ್ಯವಸ್ಥೆಯ ಕೆಲವು ನ್ಯಾಯಪದ್ಧತಿಗಳು 20ನೆಯ ಶತಮಾನದವರೆಗೂ ಉಳಿದುಕೊಂಡು ಬಂದುವೆನ್ನಬಹುದು.

	ಊಳಿಗಮಾನ್ಯ ವ್ಯವಸ್ಥೆಯಲ್ಲಿ ಅಧಿಕಾರ ಸ್ಥಳೀಯ ಶಕ್ತ ವ್ಯಕ್ತಿಗಳಲ್ಲಿ ಹಂಚಿಕೆಯಾಗಿರುತ್ತದಾದ್ದರಿಂದ ಅನಾಯಕತ್ವ ಪ್ರವೃತ್ತಿಯುಳ್ಳ ಸಡಿಲತೆಯೇ ಊಳಿಗಮಾನ್ಯ ವ್ಯವಸ್ಥೆಯ ಒಂದು ಅವಶ್ಯ ಲಕ್ಷಣವೆಂದು ಇತಿಹಾಸಕಾರರ ಸಾಮಾನ್ಯ ಭಾವನೆ. ಆದರೆ ವಾಸ್ತವವಾಗಿ ಎಲ್ಲ ಸಂದರ್ಭಗಳಲ್ಲೂ ಪರಿಸ್ಥಿತಿ ಹೀಗಿದ್ದಿತು. ಈ ವ್ಯವಸ್ಥೆಯ ಮೇಲೆ ಕುಳಿತ ದೊರೆಯ ವೈಯಕ್ತಿಕ ಸಾಮಥ್ರ್ಯವನ್ನೇ ಇದು ಬಹಳ ಮಟ್ಟಿಗೆ ಅವಲಂಬಿಸಿತ್ತು. ಆಂತರಿಕವಾಗಿ ಈ ವ್ಯವಸ್ಥೆಯಲ್ಲಿ ಅನಾಯಕತ್ವದ ಲಕ್ಷಣಗಳೇನೂ ಇರಲಿಲ್ಲ. ವೈಯಕ್ತಿಕ ಸಂಬಂಧಗಳಿಂದ ಮಾತ್ರವೇ ವಿಶಾಲ ಚಕ್ರಾಧಿಪತ್ಯದ ಏಕತೆಯನ್ನು ಕಾಪಾಡುವುದು ಸಾಧ್ಯವಾಗಿದ್ದ ಆ ಕಾಲದಲ್ಲಿ ಈ ವ್ಯವಸ್ಥೆ ಅನೇಕ ಸಾರಿ ಒಗ್ಗಟ್ಟಿನ ಸಾಧನವಾಗಿತ್ತು. 12, 13ನೆಯ ಶತಮಾನಗಳಲ್ಲಿ ಫ್ರೆಂಚ್ ದೊರೆಗಳು ಬಾಡಿದ ಹೂವಿನ ದಳಗಳಂತೆ ಉದುರಿ ಹೋಗಲಿದ್ದ ಪ್ರದೇಶಗಳನ್ನು ಒಂದಾಗಿ ಪವಣಿಸಲು ಊಳಿಗಮಾನ್ಯ ವ್ಯವಸ್ಥೆಯ ಸೂತ್ರವನ್ನೇ ಬಳಸಿಕೊಂಡರೆಂಬುದು ಉಲ್ಲೇಖನಾರ್ಹ.

	ಪಾಶ್ಚಾತ್ಯ ನಾಗರಿಕತೆ ಹಾಗೂ ಸಮಾಜಗಳ ಮೇಲೆ ಊಳಿಗಮಾನ್ಯ ವ್ಯವಸ್ಥೆಯ ಪ್ರಭಾವ ಬಲು ಆಳವಾದದ್ದು. ಸ್ವಾಮಿನಿಷ್ಠೆಯೂ ಸ್ಥೈರ್ಯ ಸಾಹಸಗಳ ಬಗ್ಗೆ ಏರ್ಪಟ್ಟ ಸಂಹಿತೆಯೂ ಈ ವ್ಯವಸ್ಥೆಯ ಸಲ್ಲಕ್ಷಣಗಳು. ಸೈನಿಕ ಶ್ರೀಮಂತವರ್ಗದ ರಚನೆ ಈ ವ್ಯವಸ್ಥೆಯ ಇನ್ನೊಂದು ಲಕ್ಷಣ. ಬಾಹ್ಯ ಶತ್ರುಗಳಿಂದ ಜನರನ್ನು ಇವರು ರಕ್ಷಿಸುತ್ತಿದ್ದರಾದರೂ ಈ ವರ್ಗದವರು ಪರಸ್ಪರವಾಗಿ ಸಣ್ಣಪುಟ್ಟ ಕದನಗಳಲ್ಲಿ ನಿರತರಾಗಿದ್ದದ್ದರಿಂದ ಪದೇ ಪದೇ ಶಾಂತಿಭಂಗವಾಗುತ್ತಿತ್ತು. ಬಲಿಷ್ಠನದೇ ನ್ಯಾಯವೆನಿಸುತ್ತಿತ್ತು. ಯುದ್ಧಾಡಳಿತ ನಿರತವಾದ ಮೇಲುವರ್ಗದ ಬೆಳೆವಣಿಗೆಯಿಂದ ಶ್ರೀಸಾಮಾನ್ಯರ ಪ್ರಾಮುಖ್ಯ ಬಲುಮಟ್ಟಿಗೆ ಕಡಿಮೆಯಾಯಿತು. ಆರ್ಥಿಕ ಬೆಳೆವಣಿಗೆಯೂ ಕುಂಠಿತವಾಗಿತ್ತು. ಧಣಿ-ಸೇವಕ, ಶ್ರೀಮಂತ-ಸಾಮಾನ್ಯ, ಅಧಿಕಾರ-ಹಕ್ಕು, ಈ ದ್ವಂದ್ವಗಳ ನಡುವೆ ಘರ್ಷಣೆ ಸಂಭವಿಸಿ ಸಮಾಜಕ್ಕೆ ಆದರ್ಶವೆನಿಸಿದ ಕ್ರಾಂತಿಕಾರಿ ಭಾವನೆಗಳು ರೂಪುಗೊಳ್ಳಲು ಈ ವ್ಯವಸ್ಥೆಯೂ ಕಾರಣವೆನ್ನಬಹುದು.									 (ಎಚ್.ಆರ್.) 

ಊಳಿಗಮಾನ್ಯ ನ್ಯಾಯಪದ್ಧತಿ : ನೆಲ ಪ್ರಾಣಗಳ ರಕ್ಷಣೆಗಾಗಿ ದುರ್ಬಲನಾದವನು ಸಬಲನನ್ನಾಶ್ರಯಿಸುವ ಮನೋಭಾವದ ಫಲವಾಗಿ ಬೆಳೆದ ಊಳಿಗಮಾನ್ಯ ವ್ಯವಸ್ಥೆ ಕ್ರಮೇಣ ಹೇಗೆ ಇಡೀ ಸಮಾಜದ ಒಗ್ಗಟ್ಟಿನ ಸಾಧನವಾಯಿತೆಂಬುದು ಹಿಂದಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ವಿಶಿಷ್ಟವಾದ ಒಂದು ನ್ಯಾಯ ವ್ಯವಸ್ಥೆಯೂ ರೂಪಿತವಾಗಿತ್ತು. ಪ್ರಾಣರಕ್ಷಣೆಗಾಗಿ ರಕ್ಷಕ-ರಕ್ಷಿತರಲ್ಲಿ ಆಗುವ ಒಡಂಬಡಿಕೆ ಅಥವಾ ಒಪ್ಪಂದವನ್ನು ಪ್ಯಾಟ್ರೊಸಿನಿಯಂ ಎಂಬುದಾಗಿಯೂ, ಸ್ವತ್ತಿನ(ಭೂಮಿ) ರಕ್ಷಣೆಗಾಗಿ ಮಾಡಿಕೊಂಡ ಒಪ್ಪಂದವನ್ನು ಪ್ರಿಕೇರಿಯಂ ಎಂಬುದಾಗಿಯೂ ಕರೆಯುತ್ತಿದ್ದರು.

	ಒಡೆಯ ಜೀತಗಾರ ಸಂಬಂಧ ಯಾವ ರೀತಿ ಸ್ಥಿರವಾಗಿತ್ತೆಂಬುದನ್ನು ಈ ಕೆಳಗಿನಂತೆ ವರ್ಣಿಸಲಾಗಿದೆ: ಜೀತಗಾರ ಒಡೆಯನ ಮುಂದೆ ಮೊಳಕಾಲೂರಿ ಕುಳಿತು ಮಣಿದು, ಒಡೆಯನ ಕೈಯಲ್ಲಿ ತನ್ನ ಕೈಹಾಕಿ ದಾಸ್ಯ ಒಪ್ಪಿಕೊಳ್ಳುತ್ತಿದ್ದ. ಮಣಿದವನು ಮೇಲೆದ್ದು ನಿಂತು ತಾನು ಕೈಂಕರ್ಯವೆಸಗುವುದಾಗಿ ಪ್ರಮಾಣ ಮಾಡಿ ಹೇಳುತ್ತಿದ್ದ. ಆಗ ಒಡೆಯ, ತಾನು ಅವನಿಗೆ ಕೊಡುವ ಕಾಣಿಕೆಯನ್ನು ವಿಧಿಪೂರ್ವಕವಾಗಿ ಅನುಗ್ರಹಿಸುತ್ತಿದ್ದ. ಎಲ್ಲಿಯವರೆಗೆ ಜೀತಗಾರ ತಾನು ಪ್ರಮಾಣಪೂರ್ವಕವಾಗಿ ಒಪ್ಪಿಕೊಂಡು ಸೇವೆಯನ್ನು ಸಲ್ಲಿಸುವನೋ ಅಲ್ಲಿಯವರೆಗೆ ಒಡೆಯನಿತ್ತ ಕಾಣಿಕೆಗೆ ಈತ ಹಕ್ಕುದಾರ. ಇದು ವಂಶಪಾರಂಪರ್ಯವಾಗಿ ಸಾಗುತ್ತಿತ್ತು.

	ಈ ವ್ಯವಸ್ಥೆಯ ಅಡಿಯಲ್ಲಿ ಹಳೆಯ ಕಾಲದ ಸ್ಥಳೀಯ ನ್ಯಾಯಾಲಯಗಳು ಮರೆಯಾಗಿ ಪ್ರತಿಯೊಬ್ಬ ಪ್ರಭುವು ಒಂದು ಪ್ರತ್ಯೇಕ ನ್ಯಾಯಾಲಯ ಏರ್ಪಡಿಸಿಕೊಂಡ. ಇಪ್ಪತ್ತನೆಯ ಶತಮಾನದಲ್ಲಿ ಶಾಸನಗಳಿಗೆ ಇರುವಷ್ಟು ಬಲ ಮಧ್ಯಯುಗದಲ್ಲಿ ಈ ಪದ್ಧತಿಗೆ ಇತ್ತು. ಪ್ರತಿಯೊಂದನ್ನೂ ಒಂದು ಕ್ರಮಕ್ಕೆ ಒಳಪಡಿಸುವಷ್ಟು ಶಕ್ತಿ ಸರ್ಕಾರಕ್ಕೆ ಆಗ ಇರಲಿಲ್ಲ. ಮೇಲಿನಿಂದ ಕೆಳಕ್ಕೆ ಪರಸ್ಪರ ಕರ್ತವ್ಯಸೇವೆಗಳ ಅಸ್ತಿವಾದದ ಮೇಲೆಯೇ ಇಡೀ ನ್ಯಾಯವ್ಯವಸ್ಥೆ ನಿಂತಿತ್ತು. ನೆಲ ಹೊಂದಿದ್ದ ಮಾತ್ರಕ್ಕೆ ಏನನ್ನಾದರೂ ಮಾಡುಬಹುದೆಂಬ ಅಧಿಕಾರ ಯಾರಿಗೂ ಇರಲಿಲ್ಲ. ನೆಲದ ಸ್ವಾಮ್ಯದೊಂದಿಗೆ ಇತರರ ಬಗ್ಗೆ ಕೆಲವು ಕರ್ತವ್ಯಗಳೂ ಇದ್ದವು. ಯುದ್ಧಕಾಲದಲ್ಲಿ ಜೀತಗಾರನಿಗೆ ರಕ್ಷಣೆ ನೀಡಬೇಕಾದ್ದು ಒಡೆಯನ ಕರ್ತವ್ಯ. ಇಬ್ಬರು ಜೀತಗಾರರ ನಡುವಣ ವ್ಯಾಜ್ಯದ ತೀರ್ಮಾನ ಪ್ರಭುವಿನ ನ್ಯಾಯಾಲಯದಲ್ಲಿ ನಡೆಯುವುದು ಸಂಪ್ರದಾಯವಾಗಿತ್ತು. ಜೀತಗಾರನ ಮೇಲೆ ಪ್ರಭುವಿನ ಅಧಿಕಾರವಿತ್ತಾದರೂ ಆತ ಪದೇ ಪದೇ ಸಂಪ್ರದಾಯದ ಕಟ್ಟು ಮುರಿದಾಗ ಆತನ ಅಧಿಪತಿ ಅವನಿಂದ ವಿವರಣೆ ಕೇಳಿದ ಸಂದರ್ಭಗಳೂ ಉಂಟು. ಮುಖ್ಯವಾಗಿ ಇಂಗ್ಲೆಂಡಿನಲ್ಲಿ ದೊರೆಯ ನ್ಯಾಯಾಸ್ಥಾನದಲ್ಲಿ ರೈತನ ದೂರಿನ ವಿಚಾರಣೆಗೂ ಅವಕಾಶವಿತ್ತು.

	ಮೇನರಿನ ಪ್ರಭುವೂ ಜೀತಗಾರನಂತೆಯೇ ಇದ್ದ. ಅವನೂ ನೆಲದ ಮೇಲೆ ಪರಮಾಧಿಕಾರ ಹೊಂದಿರಲಿಲ್ಲ. ಆತ ಮೇಲ್ಪಟ್ಟ ಪ್ರಭುವಿನ ಬಾಡಿಗೆದಾರ, ಜೀತಗಾರ, ಅರ್ಧ ಸ್ವತಂತ್ರ ರೈತ ಮತ್ತು ಸ್ವತಂತ್ರ ರೈತರ ಹಿಡುವಳಿಯ ಹಕ್ಕು ಪ್ರಭುವಿನಿಂದ ಬರುತ್ತಿತ್ತು. ಪ್ರಭುವಿಗೆ ಅವನ ಮೇಲ್ಪಟ್ಟ ಶ್ರೀಮಂತನಿಂದಲೂ ಆತನಿಗೆ ದೊರೆಯಿಂದಲೂ ಈ ಹಕ್ಕು ದೊರೆತಿರುತ್ತಿತ್ತು. ಕೆಲವು ವೇಳೆ ಈ ಕ್ರಮ ಇನ್ನೂ ಮುಂದುವರಿದು, ಒಬ್ಬ ದೊರೆ ಇನ್ನೊಬ್ಬ ದೊರೆಯಿಂದ ಈ ಹಕ್ಕು ಪಡೆದಿದ್ದ, ಗೇಣಿದಾರರು ತಮ್ಮಿಚ್ಫೆಯಂತೆ ನೆಲವನ್ನು ವಿನಿಯೋಗಿಸುವಂತಿರಲಿಲ್ಲ. ಇದಕ್ಕೆ ತಮ್ಮ ಅಧಿಪತಿಯ ಒಪ್ಪಿಗೆ ಅಗತ್ಯವಿತ್ತು. ಅವನಿಗೆ ಕಾಣಿಕೆ ಒಪ್ಪಿಸಿ ಅನಂತರ ಇನ್ನೊಬ್ಬರಿಗೆ ಅವನ್ನು ವರ್ಗಾಯಿಸಬಹುದಿತ್ತು. ಜೀತಗಾರನ ಉತ್ತರಾಧಿಕಾರಿ ಪಿತ್ರಾರ್ಜಿತ ಪಡೆಯಲು ಪ್ರಭುವಿಗೆ ಕಾಣಿಕೆ ಕೊಡಬೇಕಾಗಿತ್ತು. ಪ್ರಭುವಿನ ಉತ್ತರಾಧಿಕಾರಿಯೂ ಪಿತ್ರಾರ್ಜಿತ ಹಕ್ಕು ಪಡೆಯಲು ತನ್ನ ಅಧಿಪತಿಗೆ ತೆರಿಗೆ ಕೊಡಬೇಕಾಗಿತ್ತು. ಒಬ್ಬ ಗೇಣಿದಾರ ಸತ್ತಾಗ ಅವನ ಉತ್ತರಾಧಿಕಾರಿ ವಯಸ್ಕನಾಗಿರದಿದ್ದರೆ ಆತ ಪ್ರಾಪ್ತವಯಸ್ಕನಾಗುವವರೆಗೂ ಆತನ ಹಕ್ಕು ಪ್ರಭುವಿನ ಕೈಯಲ್ಲಿರುತ್ತಿತ್ತು.

	ಉತ್ತರಾಧಿಕಾರಿಣಿಗಳು ಪ್ರಭುವಿನ ಒಪ್ಪಿಗೆ ಪಡೆಯದೆ ಮದುವೆಯಾಗುವಂತಿರಲಿಲ್ಲ. ವಿಧವೆ ಮದುವೆಯಾಗಲು ಪ್ರಭುವಿಗೆ ದಂಡ ತೆರಬೇಕು. ವಿಧವೆ ವಿವಾಹವಾಗದಿರಬೇಕೆಂದು ಬಯಸಿದಾಗ ಆಕೆ ಮದುವೆಯಾಗಬೇಕೆಂದು ಪ್ರಭು ಒತ್ತಾಯಪಡಿಸಬಹುದಿತ್ತು. ಅದರಿಂದ ತಪ್ಪಿಸಿಕೊಳ್ಳಬೇಕಿದ್ದರೆ ಅದಕ್ಕಾಗಿಯೂ ಕಾಣಿಕೆ ಆಕೆ ತೆರಬೇಕಿತ್ತು.

	ನಾನಾ ಪ್ರಭುಗಳ ಪ್ರತ್ಯೇಕ ನ್ಯಾಯಾಲಯಗಳಿದ್ದುದರಿಂದ ಆಗಿನ ಕಾಲದ ನ್ಯಾಯ ವ್ಯವಸ್ಥೆ ಬಲು ತೊಡಕಿನದಾಗಿತ್ತೆಂದೇ ಹೇಳಬಹುದು. ನ್ಯಾಯಾಲಯದ ರುಸುಮುಗಳು ಆದಾಯ ಮೂಲಗಳಾಗಿದ್ದುದರಿಂದ ಈ ದೃಷ್ಟಿಯಿಂದಲೂ ಇವನ್ನು ಸ್ಥಾಪಿಸಲಾಗುತ್ತಿತ್ತು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸ್ಪಷ್ಟವಾಗಿ ರೂಪುಗೊಂಡ ಊಳಿಗಮಾನ್ಯ ವ್ಯವಸ್ಥೆ ಭಾರತದಲ್ಲಿ ಎಂದೂ ರೂಪುಗೊಳ್ಳಲಿಲ್ಲ. ಪಾಳೆಯಗಾರಿಕೆ ಪದ್ಧತಿಯಲ್ಲಿ ಈ ವ್ಯವಸ್ಥೆಯ ಲಕ್ಷಣಗಳನ್ನು ಕಾಣಬಹುದಾದರೂ ಇದರಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕಟ್ಟುನಿಟ್ಟುಗಳಾಗಲಿ ನ್ಯಾಯನೈಷ್ಠುರ್ಯವಾಗಲಿ ಕಾಣಬರುವುದಿಲ್ಲ.					 	
 (ಕೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ